Saturday 1 February 2014

               

                             ಹೀಗೊಂದು ಪತ್ರ 


ಪ್ರೀತಿಯ ಸಂಗಾತಿಗೆ,
                 ನಿನ್ನ ನೆನಪ ಮಳೆ ಸುರಿದಾಗ ನನ್ನ ಮನದಲ್ಲಿನ ದುಃಖದ ಅಣೆಕಟ್ಟಿನ ಒಂದೊಂದೇ ಬಾಗಿಲುಗಳನ್ನು ತೆರೆಯಲಾಗುತ್ತದೆ. ಕಣ್ಣೀರ ಜಲಪಾತ ಭೊರ್ಗರೆಯುತ್ತದೆ. ನಂತರ ಮನದ ಭೂಮಿಯಲ್ಲಿ ಬಿರುಬೇಸಿಗೆ. ನೀರಿನಂಥ ಭಾವನೆಗಳಿಗೆ ಬರ. ಕನಸುಗಳಿಲ್ಲದೆ ಕಣ್ಣಿಗೆ ದಾಹ. ಮತ್ತೆ ನಿನ್ನ ಹೊಸ ಅವತಾರ. ನಿನ್ನ ನೆನಪೆಂಬುದು ನೆತ್ತಿ ಸುಡುವ ಬಿಸಿಲು, ಮೈ ಕೊರೆವ ಚಳಿ. ಪ್ರಳಯಾಂತಕವಾಗುವಂಥ ಪ್ರವಾಹ. ಇದು ಅದೆಷ್ಟೋ ವರ್ಷಗಳಿಂದ ಆಗುತ್ತಿರುವ ನಿತ್ಯ ಅನುಭವ.
                  ನಗುವ ಹಿಂದಿನ ನೋವನ್ನು ಬಲ್ಲವನು ನೀನು. ಕಣ್ಣೀರ ಹಿಂದಿನ ಕಾರಣವನ್ನು ಕ್ಷಣದಲ್ಲಿ ತಿಳಿಯುತ್ತಿದ್ದ ಮಾಯಾವಿ. ಅದೆಲ್ಲಿ ಮರೆಯಾಗಿ ಹೋದೆಯೋ : ನನ್ನಲ್ಲಿ ನಿನ್ನ ಬಿಂಬವ ಉಳಿಸಿ. ನಿನ್ನ ಭೂತಕಾಲವನ್ನು ನೀನು ಮರೆಯುವವನಲ್ಲ ಎನ್ನುವುದ ನಾ ಬಲ್ಲೆ. ಆದರೆ ಬಾರದೆ ಹೀಗೇಕೆ ಸತಾಯಿಸುತ್ತಿರುವೆ ಎಂದು ದೇವರಾಣೆ ತಿಳಿಯುತ್ತಿಲ್ಲ ಗೆಳೆಯಾ. ನೀನಿಲ್ಲದ ಬದುಕನ್ನು ಕನಸಲ್ಲೂ ಊಹಿಸದ ನಾನು ಇಂದು  ನೀನಿಲ್ಲದೇ ಕಳೆಯುತ್ತಿದ್ದೇನೆ. ನಿನ್ನಾಣೆ, ನಾನು ದುಃಖದಲ್ಲಿಲ್ಲ. ಬದಲಾಗಿ ಆಭಾರಿಯಾಗಿದ್ದೇನೆ ಆ ದೇವರಿಗೆ, ನಿನಗೆ.  ನಿನ್ನನ್ನು ದೂರ ಮಾಡಿದ್ದಕ್ಕೆ ಆ ದೇವರಿಗೆ ಒಂಚೂರೂ ಬಯ್ಯಲಿಲ್ಲ ನಾನು. ಅಕಸ್ಮಾತ್ ನಿನ್ನನ್ನ ಕೊಡದೇ ಇದ್ದಿದ್ದರೆ ನನಗೆ ಬದುಕುಳಿಯಲು ಕಾರಣವಾದರೂ ಏನಿತ್ತು ಹೇಳು? ನನ್ನಲ್ಲಿ ನಿರೀಕ್ಷೆ, ಆಸೆಗಳೇ ಇರಲಿಲ್ಲ ನೀ ಬರುವ ಮೊದಲು. ಸಾಯಲಾಗುತ್ತಿಲ್ಲ ಎಂದು ಬದುಕುತ್ತಿದ್ದೆ ಅಷ್ಟೇ. ನಿ ಬಂದೆ ನೋಡು.... ಆಸೆಗಳ ಮಹಾಪೂರವನ್ನೇ ಹೊತ್ತುಕೊಂಡು.! no entry ಎಂದು ಮನಸಿನ ಬಾಗಿಲಿಗೆ ಬರೆದಿದ್ದರೂ ನೀ ಲೆಕ್ಕಿಸದೇ ಒಳ ಬಂದೆ.
ಶುರುವಾಯಿತು ನನ್ನಲ್ಲಿ ಹುಮ್ಮಸ್ಸು, ಸೂಖಾಸುಮ್ಮನೆ ಖುಷಿಯಾಗಿರುವ ಖಾಯಿಲೆ. ನಿನ್ನನ್ನ ನೆನಪಿಸಿಕೊಳ್ಳುವ ಚಟ. ನಿನ್ನ ನೋಡಲು, ಸಾಂತ್ವನ ಪಡೆಯಲು ಸುಳ್ಳೇ ಮುನಿಸಿನ ನಾಟಕ.
               ಸಮಯ ಕಳೆಯಲು ಹೆಣಗಾಡುತ್ತಿದ್ದ ನನಗೆ , ನನ್ನ ಸಲುವಾಗೇ ಸಮಯವಿಲ್ಲದ ಹಾಗಾಯ್ತು. ನನ್ನ ಮುಂಜಾವು, ನನ್ನ ಸಂಜೆ, ರಾತ್ರಿಗಳೆಲ್ಲ ನಿನ್ನದಾದವು. ಹಗಲಲ್ಲಿ ನಿನ್ನ ನೆನಪು, ರಾತ್ರಿ ನಿದ್ದೆ ಬಂದರೆ ನಿನ್ನದೇ ಕನವರಿಕೆ. ನಾ ಹೇಗೆ ಹೇಳಲಿ ನಿನ್ನೆಡೆಗಿರುವ ಆ ಪ್ರೀತಿ, ಆ ಪ್ರೇಮ, ಆ ಆರಾಧನೆ. !!!!! ಎಲ್ಲವನ್ನೂ ಸವಿದು, ಸಂತೃಪ್ತಿ ಹೊಂದಿ, "ನನಗೆ ಬದುಕೆಂಬುದಿದ್ದರೆ ಅದು ನಿನ್ನೊಂದಿಗೆ ಮಾತ್ರ" ಎಂಬಂಥ ಪ್ರಮಾಣದಂಥ ಮಾತಾಡಿ  ಇಂದು ಕಾಣದಂತಾಗಿ ಹೋಗಿದ್ದಿ. ಹೋದದ್ದಾದರೂ ಎಲ್ಲಿಗೆ? ನನ್ನಿಂದ ದೂರವೂ ಅಲ್ಲ, ನನ್ನೊಂದಿಗೂ ಇಲ್ಲ. ಕೇವಲ ಮನಸಿಂದ ದೂರ. ಹೀಗೆ ಅಪರಿಚಿತರ ಹಾಗೆ ಬಾಳುವುದರ ಸುಖವಾದರೂ ಏನು?
                 ಜೀವನವೆಂದರೆ ನಾವು ಪ್ರೀತಿಸುವವರ ಸಲುವಾಗಿ, ನಮ್ಮನ್ನು ಪ್ರೀತಿಸುವವರಿಗಾಗಿ ಕೊಂಚ ತ್ಯಾಗವನ್ನೂ ಮಾಡಿದರೂ ಅವರೊಟ್ಟಿಗೆ ಸಂತೋಷವಾಗಿ ಇರುವುದೇ ಅಲ್ಲದೆ ಮತ್ತಿನ್ನೇನು? ಗೊತ್ತಿದ್ದರೆ ತಿಳಿಸು. ಯಾವಾಗಲೂ ನೀ ತಿರುಗಿ ಬರುತ್ತೀಯೆಂದು ಕಾಯುತ್ತಿರುತ್ತೇನೆ; ಖುಷಿಯಿಂದಲೇ. ಬಾಳ್ವೆ ಹೇಳಿ ಕೊಟ್ಟ ಸಂಗಾತಿಗಾಗಿ ನನ್ನೀ ಬಾಳು ಮೀಸಲು.  

Sunday 25 August 2013

                  

                                               ಪ್ರೀತಿ ನನ್ನ ಕಣ್ಣಲ್ಲಿ  



                   ನನ್ನ ಲ್ಲಿನ ಆನಂದ ಹೊರಗಿನ ಕ್ರಿಯೆಗಳಿಂದ ಬಂದದ್ದಲ್ಲ. ಅದು ಆoತರಿಕವಾಗಿ ಮೂಡಿದ್ದು. ತಿಂಗಳುಗಟ್ಟಲೇ ಅವಿರತವಾಗಿ ಪ್ರಯತ್ನಿಸಿದ್ದಕ್ಕೆ ಸಿಕ್ಕ ಪ್ರತಿಫಲ. ಅದಕ್ಕೇ ಬಾಹ್ಯ ಸೌಂದರ್ಯ, ಬಾಹ್ಯ ಸಂಗತಿಗಳಾವವೂ ನನ್ನನ್ನು ತೀವ್ರವಾಗಿ ಬಾಧಿಸಲಾರವು. ತಾತ್ಕಾಲಿತವಾಗಿ ಅದೂ ತೀರಾ ಚಿಕ್ಕ ಅವಧಿಗೆ ವಿಚಲಿತಳಾಗಬಹುದಷ್ಟೇ. ಶಾಶ್ವತವಾಗಿ ಯಾರೂ ನನ್ನ ನೋವಿನಲ್ಲಿಡಲು ಸಾಧ್ಯವೇ ಇಲ್ಲ. ನಾನು  ಮೌನದಲ್ಲೂ, ಏಕಾಂತದಲ್ಲೂ ನೆಮ್ಮದಿ ಕಂಡುಕೊಂಡವಳು. 
                  ಬಲಹೀನತೆಗೂ, ಉತ್ಕಟವಾದ ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ದಿನ ಸಂಗಾತಿಯೊಂದಿಗೆ ಮಾತನಾಡಳು ಆಗದಿದ್ದಾಗ ನೋವಾದರೆ ಅದು ಬಲಹೀನತೆಯಲ್ಲ. ಅದು ಸಂಗಾತಿಯ ಬಗೆಗಿನ ತುಡಿತ, ಹಂಬಲ. ನಮ್ಮ ಸಮಯದಲ್ಲಿ ಒಂದು ಭಾಗವನ್ನ ಅವರಿಗಾಗಿ ಮೀಸಲಿಡ ಲಾಗಲಿಲ್ಲ ಎಂಬ ಆತಂಕ. ನಮ್ಮದೆಲ್ಲವನ್ನೂ ಅವರೊಂದಿಗೇ ಹಂಚಿಕೊಳ್ಳುವ ಇರಾದೆ. ನಮ್ಮ ಮನದಲ್ಲಿ ಅವರೆಡೆಗಿರುವ ಪ್ರೀತಿಯನ್ನೂ, ಆರಾಧನೆಯನ್ನೂ  ನಮಗೇ ನೆನಪಿಸುವ, ತೆರೆದಿಡುವ ಮನಸಿನ ವಿಧಾನ. ಪ್ರೀತಿ ಎಂದಿಗೂ ಬಲಹೀನತೆ ಆಗಬಾರದು. ಆಗಲಾರದು. ಅದು ಶಕ್ತಿಯಾಗಬೇಕು, ಗುರುವಾಗಬೇಕು, ಹೊಸ ಹೊಸ ಸಾಧನೆಗೈಯಲು ಪೂರಕವಾದ ಹುಮ್ಮಸ್ಸಾಗಬೇಕು. ಪ್ರೀತಿಯೆಂದರೆ ಕೇವಲ ಪಡೆಯುವುದಲ್ಲ, ಕೇವಲ ಕೊಡುವುದೂ ಅಲ್ಲ, it  is  all about  SHARING.....
                ಒಲವಿನಲ್ಲಿ ಚಿಕ್ಕ ಪುಟ್ಟ ಮುನಿಸುಗಳೂ ಇರಬೇಕು. ಅವುಗಳನ್ನು ಮುಗಿಸಿ ಮರುಕ್ಷಣ ಒಂದಾಗಬೇಕು. ಆ ಕ್ಷಣದ ಆನಂದ ಚಿರಕಾಲ ನೆನಪಿನಲ್ಲುಳಿಯಬೇಕು. I  WON HER /HIM  ಎನ್ನುವುದಕಿಂತ SHE /HE  WON ME  ಎಂದರೆ  ಅಲ್ಲಿಗೆ ಸಂಬಂಧದ ಒಂದು ಮಜಲು ಗಟ್ಟಿಯಾದoತೆಯೇ. ಹೇಳಿದರೆ ಮುಗಿಯದ, ಅನುಭವಿಸಿದಷ್ಟೂ   ತೆರೆದುಕೊಳ್ಳುವ, ಕೊಟ್ಟಷ್ಟೂ  ತುಂಬಿಕೊಳ್ಳುವ, ಪಡೆದಷ್ಟೂ ಬೇಕೆನಿಸುವ,ಇನ್ನೂ ಅಸ್ತಿತ್ವದಲ್ಲಿರುವ ಈ  ಭಾವನೆಗೊಂದು hats off. 

Sunday 14 July 2013


                                            ನ(ಕ)ನಸು 

                        ಒಂದು ದಿನ ಇದ್ದಕ್ಕಿದ್ದಂತೆ ನೀನು ಪ್ರತ್ಯಕ್ಷವಾಗಿ ನನ್ನು ಬೀಚಿಗೆ ಕರೆದೊಯ್ಯುತ್ತಿ, ಅಲ್ಲಿ ಅನೇಕ ಪ್ರೆಮಿಗಳಿರುತ್ತಾರೆ. ನಾವು ಅವರಂತಿರದೆ ಇಬ್ಬರೇ ಬೀಚಿನ ನೆರಳ ಪ್ರದೇಶಕ್ಕೆ ಬಂದು ಕುಳಿತುಕೊಳ್ಳುತ್ತೇವೆ. ನಿನ್ನ ಭುಜಕ್ಕೆ ಆನಿಕೊಂಡ ನಾನು ಹಾಗೇ ಸಾಗರದ ಆರ್ಭಟವನ್ನು ನೋಡತೊಡಗಿ ಅದರಲ್ಲೇ ತಲ್ಲೀನಳಾಗಿಬಿಡುತ್ತೇನೆ. ನನ್ನ ಮನಸಲ್ಲಿ- "ನೀನು ಸಾಗರ ತೇರ. ನನ್ನನ್ನು ಕೈ ಚಾಚಿ ಕರೆಯುತ್ತಿ. ನಾನು ಕಡಲ ಅಲೆ. ನಿನಗೆ ನನ್ನ ಪ್ರೀತಿಯ ಸ್ಪರ್ಶ ತೋರಿಸಿ, ಅದರ ಬಿಸಿ ಆರುವ ಮುನ್ನವೇ ಮತ್ತೆ ಓಡಿಬಂದು ನಿನ್ನ ಸೇರುತ್ತೇನೆ... ಇದು ಪ್ರಪಂಚವಿರುವವರೆಗೆ ಅಪ್ರಯತ್ನವಾಗಿ ನಡೆವ ನಿರಂತರ ಕ್ರಿಯೆ:ಪ್ರೀತಿಯ ಹಾಗೆ.." ಎಂದು ಯೋಚನೆ. ಬಹಳ ಅಂದರೆ ಬಹಳ ಹೊತ್ತಿನವರೆಗೆ ನಾವು ಮಾತನ್ನೇ ಆಡುವುದಿಲ್ಲ. ಆ ಮೌನ ಅಸಹನೀಯವಲ್ಲ. ನಿನ್ನೊಂದಿಗಿರುವಾಗ ಮಾತಿಗಿಂತ ಮೌನವೇ ಇಷ್ಟ. ಆ ಮೌನದಲ್ಲೂ ಅದೆಂಥ ಭರವಸೆ, ಅದೆಷ್ಟು ನೆಮ್ಮದಿ.!
                     ಕಡಲ ಮೊರೆತದಲ್ಲೇ ಲೀನವಾದ    ನಾನು ನಿದ್ದೆಯಿಂದೆದ್ದಂತೆ ಒಮ್ಮೆ ಬೆಚ್ಚಿ ಪಕ್ಕಕ್ಕೆ ನೋಡಿದರೆ ನನ್ನನ್ನೇ ಎವೆಯಿಕ್ಕದೆ, ಅಪ್ಯಾಯಮಾನವಾದ ಪ್ರೀತಿ ಕಂಗಳಿಂದ ನೋಡುತ್ತಿರುವ  ನೀನು. ಹೇಗೋ ಇಬ್ಬರಿಗೂ ತಿಳಿಯುತ್ತೆ; ಇಬ್ಬರೂ ಒಂದೇ ಯೋಚನೆ ಮಾಡುತ್ತಿರುವುದು. ಏಕೋ ಸಮುದ್ರ ನೋಡಿದರೆ ನೀರ ಆರ್ಭಟ ತುಸು ಹೆಚ್ಚಾಯ್ತು. ಏಕೆಂದರೆ ಬಾನೆಲ್ಲ ಕೆಂಪಾಗಿರುತ್ತದೆ. ಒಹ್! ಸೂರ್ಯನಿಗೆ ನಮ್ಮನ್ನು ನೋಡಿ ಅಸೂಯೆ ಮೂಡಿ ತಾನೇ ಮರೆಗೆ ಸರಿಯುತ್ತಿದ್ದಾನೆ. ನೀನು ನನ್ನ ತಲೆ ನೇವರಿಸಿ, ಹಣೆಗೊಂದು ಹೂಮುತ್ತು ನೀಡುತ್ತೀ. ನಿನ್ನ ಬಾಹುಗಳಲ್ಲಿ ಭದ್ರವಾದ ನಾನು ನಿನ್ನೊಂದಿಗೆ ನಡೆಯುತ್ತೇನೆ. "ನೀನೆಲ್ಲಿಗೆ ಕರೆದೊಯ್ಯುತ್ತಿ?" ಅಂತ ನಾ ನಿನ್ನ ಕೇಳುವುದಿಲ್ಲ. ನೀನು ಎಲ್ಲೆಂದರಲ್ಲಿ ಬರಲು ನಾನು ತಯಾರು, ನೀ ಬಳಿಯಿರಬೇಕಷ್ಟೇ. 
                     ನಡೆಯುತ್ತ ನಡೆಯುತ್ತ ನೀ ನನ್ನ ಕಣ್ಣು ಮುಚ್ಚುತ್ತಿ, ಸ್ವಲ್ಪ ಮುಂದೆ ಹೋಗಿ ಕಣ್ಣ ತೆರೆದರೆ, ನಂತರ! ನಿನ್ನದೊಂದು ಒಹ್!sorry! ನಮ್ಮದೊಂದು ಪುಟ್ಟ ಮನೆ. ಆ ಹೊತ್ತಿಗಾಗಲೇ ನಿನಗೆ ನನ್ನನ್ನು ಪಡೆದ  ನೆಮ್ಮದಿ. ನನಗೆ ಆನಂದದಿಂದ ತೇವಗೊoಡಿದ್ದು ಕಣ್ಣ ತುದಿ.  ನಿನ್ನ ಕಣ್ಬೆಳಕಾಗಿ ನಾನು, ನನ್ನ ಜೀವ ನೀನು ಆಗಿ ಮನೆಯೊಳಗೆ ಒಟ್ಟಿಗೆ ಕಾಲಿಟ್ಟು, ನಾವಿಬ್ಬರೇ ನಿಂತು ಮಾಡಿಕೊಂಡ ಮದುವೆ, ಗೃಹಪ್ರವೇಶ. 
                         ಸಂತೋಷದಿಂದಾಗಿ ಅಳುತ್ತಿದ್ದಾಗಲೇ ಎಚ್ಚರಾಗಿ 'ಅದೊಂದು ಕನಸು' ಅನ್ನೋದು ಸಾಬೀತಾಗದಿದ್ದರೆ ಬಹುಶಃ  ಬೆಳಿಗ್ಗೆ ಎದ್ದು 'ನನ್ನವನು ಎಲ್ಲಿ?' ಎಂದು ಹುಡುಕುತ್ತಿದ್ದಳೇನೋ ಈ ನಿನ್ನ ಹುಚ್ಚಿ. 
ಇಂತಹ ಸಾವಿರಾರು ಕನಸುಗಳ ಸುತ್ತ ನಿನ್ನನ್ನೇ ಕೇಂದ್ರವಾಗಿಸಿಕೊಂಡು ಬಾಳುತ್ತಿದ್ದೇನೆ, ಬರದೆ ಇರಬೇಡ. 


                                                           ಜೀವನದ ತುಂಬ ನಿನ್ನವಳು  

ತಾಳ ತಪ್ಪಿದೆ 


ಎಲ್ಲೋ ಏನೋ ತಪ್ಪು ನಡೆದಿದೆ ಅಥವಾ ಸರಿ ಇತ್ತೆಂದು  ಭ್ರಮೆಯಾಗಿದೆ. ನಾ ನಿನ್ನ ಬಯಸಿದೆ, ನೀ ನನ್ನ ಪ್ರೀತಿಸಿದೆ. ಇಬ್ಬರ ನಡುವೆ ಪ್ರೀತಿ, ಪ್ರಣಯಗಳ ಹಂಚಿಕೆಯಾಗಿದೆ. ಇಬ್ಬರೂ ಹುಸಿ ಮುನಿಸು ತೋರಿಸಿ ಮತ್ತೆ ಅಗಾಧ ಪ್ರೀತಿಯಿಂದ ಒಂದಾಗಿಯೂ ಆಗಿದೆ. ನಿನ್ನೊಬ್ಬನ ಸಲುವಾಗಿ ನಾನು ಸರ್ವವನ್ನೂ ಕಳೆದುಕೊಂಡೆ. ಆದರೆ ಅಧೀರಳಾಗಲಿಲ್ಲ  ಏಕೆಂದರೆ ನೀ ಜೊತೆಯಿದ್ದೀಯೆoಬ ತೃಪ್ತಿಯಿತ್ತು, ಇಡೀ ಬಾಳಿಗಿದು ಸಾಕಿತ್ತು. ಆದರೆ ದೈವೇಚ್ಛೆ ಬೇರೆಯೇ ಇತ್ತು. ನಮ್ಮ ಪ್ರೀತಿ, ಪ್ರೇಮಕ್ಕೆ ಯಾರೋ ವಿಷವುಣಿಸಿದ್ದರು. ನೀ ಬದಲಾದೆ, ನಾ ಹಾಗೇ ಉಳಿದೆ. ಇದೆಲ್ಲ ತಿಳಿದ ಮೇಲಾದರೂ ನೀ ಮರಳಿ ಬರುವೆಯೇನು? ಅಲ್ಲಿಯವರೆಗೆ ನಾನು ಇರುವೆನೇನು? ಎಲ್ಲ ಪ್ರಶ್ನೆಗಳಿಗೂ ನಿನ್ನಲ್ಲೇ ಉತ್ತರವಿದೆ. ನಾನು ಬಾನಲ್ಲಿ ಲೀನವಾಗುವ ಮುಂಚೆ ತಿಳಿಸಿಬಿಡು. ನಿನ್ನ ಆಗಮನಕ್ಕಾಗಿ ಕ್ಷಣಗಣನೆ ಮಾಡುತ್ತ ಕಾಯುತ್ತಿದ್ದೇನೆ, ನಿರಾಸೆಗೊಳಿಸಬೇಡ.


                                                    ಸದಾ ನಿನ್ನ ನಿರೀಕ್ಷೆಯಲ್ಲಿ

ನನ್ನಲ್ಲಿ ನೀನು 


ನಿನ್ನ ಪ್ರೀತಿಸುತ್ತ ಪ್ರೀತಿಸುತ್ತ "ನನ್ನನ್ನೇ ನಾನು ಕಳೆದುಕೊಂಡುಬಿಟ್ಟೆನಾ" ಎಂದು ಭಯಪಟ್ಟಿದ್ದೆ. ಆಮೇಲೆ ತಿಳಿಯಿತು - ನಿನ್ನ ನೆನಪು ನನ್ನನ್ನೂ ಮುಚ್ಚಿಹಾಕಿ ನನ್ನ ಇರುವನ್ನು ಮರೆಸುವಷ್ಟು ಗಾಢವಾಗಿ ನನ್ನನ್ನಾವರಿಸಿದೆ.

ನಿನ್ನ ಪ್ರೀತಿಸಲು ನನಗೆ ಅಗತ್ಯವಿತ್ತಾ ಗೊತ್ತಿಲ್ಲ. ನಿನ್ನನ್ಯಾಕೆ ಈ ಪರಿ ಪ್ರೀತಿಸುವೆನೋ ಗೊತ್ತಿಲ್ಲ..  ಕೊನೇಪಕ್ಷ ನೀನು ನನ್ನನ್ನ ಕಣ್ಣೆತ್ತಿ ನೋಡದಿದ್ದರೂ ನಾನು ಹೀಗೇ ಹೀಗೇ ನಿನ್ನನ್ನ ಅತಿಯಾಗಿ, ಅದಮ್ಯವಾಗಿ ಪ್ರೀತಿಸುತ್ತಲೇ ಇರುತ್ತಿದ್ದೆ ಎನ್ನುವುದು ನನ್ನ ಪ್ರೀತಿಯಷ್ಟೇ ಸತ್ಯ. ನಿನ್ನಿಂದಾಗಿ ನನಗೆ ಹುಚ್ಚು ಹಿಡಿಯಿತಾ? ಅಥವಾ ಹಿಡಿದ ಹುಚ್ಚು ಬಿಟ್ಟಿತಾ? ಉಹುಂ! ಅದೂ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ನಿನ್ನ ಕಂಡ ಕ್ಷಣದಿಂದ ನನಗೆ ಏನೂ ಏನೂ ಏನೇನೂ ತೋಚುತ್ತಿಲ್ಲ:ನಿನ್ನನ್ನು ಬಯಸುವುದರ ವಿನಾ ..... 

ಹುಚ್ಚುತನ?


ಎಷ್ಟೋ ವಸ್ತುಗಳನ್ನು ಗೊತ್ತಿಲ್ಲದೆಯೇ ಕಳೆದುಕೊಳ್ಳುತ್ತೇನೆ, ಎಷ್ಟನ್ನೋ ಗೊತ್ತಿದ್ದೂ ಕಳೆದುಕೊಳ್ಳುತ್ತೇನೆ. ನಾ ಪ್ರೀತಿಸುವವರ ಸಲುವಾಗಿ ಇಷ್ಟದ್ದನ್ನು ಕಳೆದುಕೊಳ್ಳುತ್ತೇನೆ. ನಿನಗೆ ನಿನ್ನದೆಲ್ಲವನ್ನೂ ಹಂಚಿಕೊಳ್ಳಲು ಬೇರೊಬ್ಬರಿರಬಹುದು ಆದರೆ  ನನಗೆ ಮಾತ್ರ ಪ್ರತಿಯೊಂದಕ್ಕೂ "ನೀನೇ " ಬೇಕು.... ನಿನಗಾಗಿ ಕ್ಷಣ ಕ್ಷಣ  ಎಣಿಸಿ ಜನ್ಮವಿಡೀ ಕಾದುಬಿಡುವೆ, ಬಾಯಿಬಿಟ್ಟು "ಬರಲಾರೆ" ಎನಬೇಡ. ಒಮ್ಮೊಮ್ಮೆ............................... ನಿನ್ನ ಕೂಗಿ ಕರೆಯಬೇಕು, ಕೈ ಚಾಚಿ ಬರಮಾಡಿಕೊಳ್ಳಬೇಕು ಅಂದುಕೊಳ್ಳುತ್ತೇನೆ. ಆದರೆ ನನ್ನಿಂದ ಅದು ಸಾಧ್ಯವೇ ಆಗದು... ಏಕೆಂದರೆ ನೀನು ನನ್ನವನಲ್ಲ, ನೀನೇ ನೀಡಿದ ನೋವ ಮರೆಯಲು ನೀನು ಸಾವಿರ ಸಲಹೆಗಳನ್ನು ಕೊಡಬಹುದು. ನಾನದರ ಸ್ವೀಕರಿಸಲಾರೆ. ನೀನಿಲ್ಲದಿದ್ದರೂ ನಿನ್ನ ನೆನಪುಗಳಾದರೂ ಜೊತೆಯಿರಲಿ, ನನ್ನ ನಗುವಿಗೊಂದು ಕಾರಣವಿರಲಿ. ಬೇಡ ಎನ್ನಬೇಡ.
                                                ಇಂತಿ ನಿನ್ನವಳು 

ನಿನ್ನೊಂದಿಗೆ ನನ್ನ ಬಾಳು 


ನೀ ನು  ಅ o ತ ರ್ಯಾ ಮಿ : ನನ್ನೊಳಗೆ   ನಿನ್ನ ಭಾವಗಳ ಭೋರ್ಗರೆತವಿಲ್ಲ. ಅವು ಹುಚ್ಚೆದ್ದು ಆರ್ಭಟಿಸುವುದಿಲ್ಲ . ನೀ ಮೌನಗಂಗೆಯಾಗಿ ನನ್ನಲ್ಲೇ ಪ್ರವಹಿಸುತ್ತೀ . ನಿನ್ನ ನೆನಪುಗಳೂ ಹಾಗೆಯೇ, ಒಳಗೊಳಗೇ ಹರಿದು ಮನದ ಭೂಮಿಯ ಮೇಲಿನ ಕಡಲ ಸೇರುತ್ತವೆ. ನೋಡುವವರಿಗೆ ನಾನು ದೃಷ್ಟಿ ಕೆಳಗೆ ಹಾಕಿ ಕೂತ  ಹೆಣ್ಣು, ಆದರೆ ನಾನು ನಿನ್ನ ನೆನಪುಗಳೊoದಿಗೆ ಸೆಣಸುತ್ತಾ ಇರುವವಳು. 
    ಅದೆಷ್ಟೋ ಬಾರಿ ನನ್ನ  ನಾನೇ ಕೇಳಿಕೊಳ್ಳುತ್ತೇನೆ : ನಾನ್ಯಾಕೆ ನಿನ್ನ ನೆನೆಯುತ್ತೇನೆ ಎಂದು, ಉತ್ತರ ಶೂನ್ಯ. ನನ್ನ ಪ್ರತೀ ಹೆಜ್ಜೆಯಲ್ಲೂ ನಿನ್ನ ಕುರುಹು, ಪ್ರತೀ  ಕ್ಷಣದಲ್ಲೂ ನಿನ್ನ ನೆನಪು, ಜೊತೆಗೆ ಅನುಭವಿಸಲಾಗದ, ಅವ್ಯಕ್ತ  ವೇದನೆ. ನಾನು ಆ  ವೇದನೆಯಿಲ್ಲದೆ ಬದುಕಲಾರೆನೇನೋ ಎನ್ನುವಷ್ಟರ ಮಟ್ಟಿಗೆ ಅದು ನನ್ನೊಂದಿಗಿದೆ: ಅದೆಷ್ಟೋ ವರ್ಷಗಳಿಂದ.... ಏನಾಯಿತು ಗೆಳೆಯಾ, ನೀನಿಲ್ಲದಿದ್ದರೆ ನನ್ನ ಜೊತೆಗೆ, ನಿನ್ನ ನೆನಪುಗಳ ಗುಚ್ಚ ಸಾಕೆನಗೆ ಈ  ಜನ್ಮಕೆ.